Sunday 20 March 2016

ಪ್ರಗತಿಪಥ




 

ದೇವರಿಹನೆ ಪಟದಲ್ಲಿ

ದೇವರಿಹನೆ ಗುಡಿಯಲ್ಲಿ

ದೇವರಿಹನೆ ಕಲ್ಲಿನಲ್ಲಿ ಎಂದು ಕೇಳ್ವರು

ದೀಪ ಹಣ್ಣುಕಾಯಿ ಏಕೆ

ಎಲ್ಲ ಬರಿದೆ ಬೂಟಾಟಿಕೆ

ಜಾಣರಾಗಿ ಎಂದು ಪ್ರಗತಿ ಪಥವ ತೋರ್ವರು



ಅಂಥವರಿಗೆ ಸ್ವಲ್ಪ ಕಾಲ

ತುಂಬಲಾರದ ನಷ್ಟವಾಯ್ತು

ನಾಯಕನ ಕಾಲವಾಗೆ ಮಂಕು ಬಡಿಯಿತು

ವಿದಾಯದ ಸರಿಹೊತ್ತು

ನಾಯಕನ ಪಟವ ಹೊತ್ತು

ಬೀದಿ ಮೂಲೆ ಮೂಲೆಗಿಟ್ಟು ಬಳಗ ಕರೆದರು



ಭಾರ ಭಾರ ಹೂವ ಹಾರ

ಪಟದ ಮೇಲೆ ಇಳಿಯಬಿಟ್ಟು

ದೀಪ ಬೆಳಗಿ ಧೂಪ ಹರಡಿ ಕಂಬನಿ ಮಿಡಿದರು

ಉಳಿದವರಲಿ ಕಂಡಂತಹ

ಬಳಗವೆಲ್ಲ ಬಲ್ಲಂತಹ

ಹಿರಿಯ ತಲೆಯ ಕರೆದು ತಂದು ಪೂಜೆಗೈದರು



 

ಬಂದು ಬಂದು ಶಿಸ್ತಿನಿಂದ

ಪುಷ್ಪ ಕೊಂಡು ಭಕ್ತಿಯಿಂದ

ಪಟಕೆ ಸಲಿಸಿ ಕೈಯ್ಯ ಮುಗಿದು ಧನ್ಯರಾದರು

ಪಟದಲಿಹ ನಾಯಕನಿಗೆ

ಪೈಪೋಟಿಯ ನಿಷ್ಠೆ ಮೆರೆದ

ಬುದ್ಧಿವಂತರ ಕಂಡು ಮಂದಿ ಮೂಕರಾದರು



------------------







Wednesday 15 October 2014

                                                                                           
                                            ಇದು  ಜೀವನ


                                    ಅಲ್ಲಿಗೆ ಸಮೀಪಿಸುತ್ತಿದ್ದಂತೆ ಎದೆ ಬಡಿತ ತಾರಕಕ್ಕೇರಿತು. ಹೊಟ್ಟೆಯೊಳಗಿದ್ದುದೆಲ್ಲ ತೊಳಸಿಕೊಂಡು ಬಾಯಿಗೆ ಬಂದ ಅನುಭವ. ಅಯ್ಯೊ ದೇವರೆ,ಯಾಕಿಂತಹ ಪರೀಕ್ಷೆ? ಪ್ರತಿದಿನ ತಪ್ಪದೆ ಹಚ್ಚಿದ ದೀಪಗಳಿಗೆ ಬೆಲೆಯಿಲ್ಲವೆ?
    "ಅಮ್ಮ, ನಂಗೆ ಚಪಾತಿ ಬೇಡ, ಬೇರೆ ಏನಾದ್ರೂ ಕಳ್ಸು. ಹೊಸ ವಾಟರ್ ಬಾಟ್ಲ್ ತಗೊಂಡ್ ಹೋಗ್ತೀನಿ. ಅಮ್ಮ, ಹಬ್ಬಕ್ಕೆ ತಗೊಂಡ್ವಲ್ಲ ಆ ಪ್ಯಾಂಟ್ ಹಾಕ್ಕೊಂಡ್ ಹೋಗ್ಲಾ?"
ಎಷ್ಟೆಲ್ಲ ಉತ್ಸಾಹ ಸಂಭ್ರಮ! ಚಿರೂ ಕೇಳಿದ್ದ ಬೇರೆ ತಿಂಡಿ ಕಳಿಸಲು ನನಗೇನಾಗಿತ್ತು?
ಅದೇ ಚಪಾತಿ, ಹೊಟ್ಟೆಗೆ ದಿಂಡಾಗಿರುತ್ತೆ ಅಂದುಕೊಂಡು ಕಳಿಸಿದೆನಲ್ಲ.... ಅಯ್ಯೊ ಚಿರೂ ಎಲ್ಲಿದ್ದೀ ನನ್ನ ಮಗನೆ...ಢವಗುಟ್ಟುವ ಹೃದಯದೊಂದಿಗೆ ಕೋಟೆ ರಾಮನ ಹಳ್ಳದ ಹತ್ತಿರ ಬರುತ್ತಿದ್ದಂತೆ......
ಅಯ್ಯೊ... ಕಾಲಿಗೆ ಬಡಿದ ಈ ವಾಟರ್ ಬಾಟಲ್ ಚಿರೂದಾ....ಈ ಸ್ಲಿಪ್ಪರ್ರು...ಹೌದು ಚಿರೂದೇ...ಅಲ್ಲ.. ಅವನದ್ದು ಬೇರೆ ಬಣ್ಣ. ನಾಭಿಯಾಳದಿಂದ ದುಃಖ ಒತ್ತರಿಸಿಕೊಂಡು ಬಂತು....ಶಬ್ದ ಮಾಡುತ್ತ ಜೋರಾಗಿ ಅತ್ತೆ, ನಿಂತಲ್ಲಿಯೇ ಕುಕ್ಕರಗಾಲಲ್ಲಿ ಕುಳಿತು...
" ಪಾಪ, ಮಗುವನ್ನು ಕಳಕೊಂಡ ಕರುಳು"
"ನೋಡಕ್ಕಾಗಲ್ಲ, ಸೀತಮ್ಮ ಬನ್ನಿ ಹೋಗೋಣ"
"ನೋಡಿ ಮೇಡಂ, ಈ ಬ್ಯಾಗು ನಿಮ್ಮ ಮಗೂದಾ"
"ಎಲ್ಲ ಈ ಕಡೆ ಬನ್ನಿ,ದಯವಿಟ್ಟು ಮಕ್ಳನ್ನ ಹೊರಗೆ ತೆಗೆಯೋದ್ ಬೇಡ್ವ ಹೇಳಿ, ಬನ್ನಿ ಸರ್
ಅರ್ಥಮಾಡ್ಕೊಬೇಕು, ದೂರ ನಿಂತ್ಕೊಳ್ಳಿ, ಪ್ಲೀಸ್"
ರಾಘವೇಂದ್ರ, ತಿಮ್ಮಪ್ಪ, ಮಂಜುನಾಥ, ನಮ್ಮ ಚಿರೂಗೆ ಏನೂ ಆಗದಿರಲಿ.....
ಗುಂಪುಗೂಡಿ ಅವಗಢವನ್ನು ನೋಡಿ ಪರಿತಪಿಸಿ ತಲೆಗೊಂದು ಮಾತನಾಡುತ್ತಿದ್ದ ಜನರನ್ನು ದೂಡಿಕೊಂಡು ಮುಂದೆ ...
ಅಯ್ಯೊ....ಬಸ್ಸು ಮುಕ್ಕಾಲು ಮುಳುಗಿಹೋಗಿದೆಯಲ್ಲ... ಚಿರೂ ಎಲ್ಲಿ ಸಿಕ್ಕಿಬಿದ್ದಿದೆಯೋ..ಕಂದಾ. ಅಮ್ಮ ಬಂದಿದ್ದೀನಿ ಕಣೋ....ಚಿರೂ....ಚಿರೂ..ಚಿರೂ ಎಲ್ಲಿದ್ದೀ ಕಂದಾ...
" ತಾಯಿ, ನಿಮ್ಮ್ ನೋವು ನಮಗೆ ಅರ್ಥವಾಗುತ್ತೆ.. ನೀವು ಸ್ವಲ್ಪ ಸಹಕರಿಸಿದ್ರೆ ನಾವು ಬೇಗ ಕಾರ್ಯಾಚರಣೆ ಮಾಡಬಹುದು...ದಯವಿಟ್ಟು ದಯವಿಟ್ಟು ಎಲ್ಲ ಸ್ವಲ್ಪ ದೂರ ನಿಲ್ಲಿ"
ಅಯ್ಯೋ,, ಬಸ್ಸು ಇನ್ನೂ ಮುಳುಗುತ್ತಿದೆ....ಬದುಕಿದ್ದ  ಚಿರೂ ಇನ್ನೂ ನೀರೊಳಗೆ...
."ಸರ್ ಸರ್ ಪ್ಲೀಸ್, ನನ್ ಮಗನ್ನ ನೋಡಿ ಸರ್, ಅಲ್ಲೆ ಕಿಟಕಿ ಹತ್ರವೇ ಎಲ್ಲೋ ಇರ್ತಾನೆ"...
"ಯಾಕ್ರಪ್ಪ ಇಷ್ಟು ನಿಧಾನ.. ಬೇಗ ಬೇಗ ಹೆಜ್ಜೆ ಹಾಕೀಪ್ಪ ..ನನ್ನ್ ಮಗೂ ಅಲ್ಲಿ ಎಷ್ಟು ಕಷ್ಟ ಪಡ್ತಿದೆಯೋ?ನಮ್ಮನ್ನಾದ್ರೂ ಬಿಡಿ....ನಮಗೂ ಹೋಗಕ್ಕೆ ಬಿಡಲ್ಲ...ನೀವು...."
                                   
     .....ಆಗಲ್ಲ ನನ್ನ ಕೈಯಲ್ಲಾಗಲ್ಲ ತಡ್ಕೊಳ್ಳಕ್ಕೆ.... ಚಿರೂಗೆ ಎಷ್ಟು ಭಯವಾಗಿದೆಯೋ, ಅಮ್ಮಾ ಅಮ್ಮಾಂತ ಎಷ್ಟು ಸರ್ತಿ ಕೂಗಿದೆಯೋ.. ನೀರು ಬೇಕು ಅಂತನಿಸಿದ್ರೆ... ವಾಟರ್ ಬಾಟಲ್ ?...ಇಲ್ಲೇ ಇದೆಯಲ್ಲ.... ದೇವ್ರೆ... ಬಯಸಿ ಬಯಸಿ ಪಡೆದ ಮಗೂನ ಹೀಗ್ ಕಿತ್ಕೊಳ್ಳೊ ಹಾಗಿದ್ರೆ ಯಾಕೆ ಕೊಟ್ಟೆ?
ಅಮ್ಮಾ...ನೆನ್ನೆಯೆಲ್ಲ ಟೂರಿದೆ ಅಂತ ಎಷ್ಟ್ ಖುಷಿಯಲ್ಲಿ ಓಡಾಡ್ತಿತ್ತು.. ಇದಕ್ಕೇನಾ...ಈ ಭಾಗ್ಯಕ್ಕಾ... ಯಾವುದೋ ಮಗೂನ ಎತ್ಕೊಂಡ್ ಬರ್ತಾ ಇದ್ದಾರೆ... ಹಾಳಾದ್ದು.. ಟೂರಿಗ್ ಹೋಗೋವಾಗ್ಲೂ ಯೂನಿಫಾರಮ್ಮಾ? ಬೇಕಿತ್ತಾ... ಯಾರ ಮಗು ಏನೂಂತಲೇ ತಿಳೀತಿಲ್ಲ....ಹೊಸ ಪ್ಯಾಂಟ್ ಹಾಕ್ಕೊತ್ತೀನಿ ಅಂತ ಅಂಗಲಾಚಿತ್ತಲ್ಲ...
"ಎಲ್ಲಪ್ಪ ಸ್ವಲ್ಪ ಮಗೂನ ತೋರ್ಸಿ .. ನಮ್ ಚಿರೂನೂ ಯೂನಿಫಾರಂ ಹಾಕ್ಕೊಂಡಿದ್ದಾ ಕಣಪ್ಪಾ.."
" ಸ್ವಲ್ಪ ತಡೀರಿ ತಾಯಿ,, ಅಲ್ಲಿ ಮಲಗಿಸ್ತೀವಿ.. ನೋಡೋವ್ರಂತೆ...."
"ಅಯ್ಯೊ ಮಗು ಸತ್ತುಹೋಗಿದೆಯಾ..... ಅಲ್ಲ ಇದು ಚಿರೂ ಅಲ್ಲ..ಅವನ  ಕಿವೀಲಿ ಟಿಕ್ಕಿ ಇರಲಿಲ್ಲ..
ಈ ಮಗು ಕಿವೀಲಿ ಅದಿದೆ.. ಭಗವಂತ ಚಿರೂ ಬದುಕಿರ್ಲಿ ದೇವ್ರೆ..."
" ನೋಡಿ .. ಈ ಮಗು ಕಡೆಯವ್ರು ಯಾರಮ್ಮ.. ಮಗು ಉಸಿರಾಡ್ತಿದೆ.. ನಮ್ಮ್ ಜತೆಗೆ ಆಸ್ಪತ್ರೆಗೆ ಬರಬೇಕು..."
ಹಾಂ.. ನಮ್ಮ ಚಿರೂ ತರಹವೆ ಇದೆ... ನಾನು ನಾನ್ ಬರ್ತೀನಪ್ಪ ...ನಾನ್ ಬರ್ತೀನಿ..ನನ್ ಹತ್ರ ಕೊಡಿ ಮಗೂನ... ಅಲ್ಲ.. ಇದೂ ಚಿರೂ ಅಲ್ಲ...ಚಿರೂ ಫ್ರೆಂಡು..ಅಯ್ಯೋ ಅಜಯ್.. ಚಿರೂ ಇವನ ಜತೇಲೆ ಇರ್ತಿದ್ದ... ನೋಡಿಪ್ಪ ಈ ಮಗು ಜತೇಲಿ ನನ್ನ ಮಗೂನೂ ಇತ್ತು.. ಸ್ವಲ್ಪ ಬೇಗ ನೋಡಿಪ್ಪ....
"ಇದೇ ಕಡೇ ಮಗು ಮೇಡಂ. ಎಲ್ಲ ಬಾಡೀನೂ ಹಾಸ್ಪಿಟಲ್‍ಗೆ ಕಳ್ಸಿದ್ದೀವಿ.. ನಮ್ ಜತೆ ಬನ್ನಿ...ಅಲ್ಲೇ ನೋಡಿ.. ಹತ್ತಿ ಮೇಡಂ ವಾನ್ ಹತ್ತಿ...."
..ಆಸ್ಪತ್ರೆಯ ಹಿಂದೆ ಜಗಲಿಯ ಮೇಲೆ ಮಲಗಿಸಿರುವ... ಈ ಮುವ್ವತ್ತು ಮುವ್ವತೈದು ಮಕ್ಕಳಲ್ಲಿ ನನ್ನ ಚಿರೂ....ಅಯ್ಯೋ ಅಮ್ಮಾ.. ತಡೀಲಾರೆ... ಚಿರೂ.. ನನ್ ಕಂದಾ ...
"ಶಾಂತೂ .. ಸಮಾಧಾನ ಮಾಡ್ಕೊ..ಈ ಡೆಡ್ ಬಾಡೀಸಲ್ಲಿ ನಮ್ ಚಿರೂ... ನೋಡು ನಾನು ಆಗ್ಲಿಂದ ನಿನ್ನ ಹುಡುಕ್ತಾ ಇದ್ದೆ.. ಆ ಗುಂಪಲ್ಲಿ ನೀನು ಕಾಣಲೇ ಇಲ್ಲ.. ನೋಡೋಣ.. ಸುಮ್ನೆಯಿರು.".
"ಇಲ್ಲಾರಿ ನನ್ ಕೈಯ್ಯಲ್ಲಿ ತಡೆಯೋಕ್ ಆಗ್ತಾಯಿಲ್ಲ.. ನಮಗೇ ಯಾಕ್ರಿ ಹೀಗೆಲ್ಲ ಅಗುತ್ತೆ..."
" ನೋಡು, ನಿನ್ನ ಹಾಗೆ ಅಲ್ಲಿ ಎಷ್ಟು ಜನ ಪೇರೆಂಟ್ಸ್ ಆತಂಕದಲ್ಲಿದ್ದಾರೆ.. ಅಳತಾಯಿದ್ದಾರೆ...ಒಳಗೆ ವಾರ್ಡ್ನಲ್ಲೂ ಕೆಲವು ಮಕ್ಕಳಿದ್ದವು.. ಅಲ್ಲೂ ಹೋಗಿ ನೋಡ್ದೆ. ನಮ್ ಚಿರೂ ಅಲ್ಲಿಲ್ಲ ಕಣೆ..."
"ನೀವೂ ಅಳಬೇಡಿ  ನನಗೆ ಸಹಿಸಕ್ಕಾಗಲ್ಲ.. ಈಗ ಮತ್ಯಾರನ್ನ ವಿಚಾರಿಸೋದು.."
"ನೀನು ಮನೇಗ್ ಹೋಗು, ಬಾ ನಾ ಬಿಟ್ಟು ಬರ್ತೀನಿ.. ಇಲ್ಲಿದ್ರೆ ನಿನಗೂ ...."
"ಚಿರೂ ಇಲ್ಲದ ಮನೇಗೆ ನಾನು ಬರಲ್ಲ... ಬಿಡಿ ನನ್ನ... ನಾನೂ ಚಿರೂ ಜತೆಗೆ ಹೋಗ್ತೀನಿ...ಬಿಡಿ ಬಿಡಿ...."
"ಇವ್ರನ್ನ ಸ್ವಲ್ಪ ಆ ಕಡೆ ಕರಕೊಂಡ್ ಹೋಗಿ ಸಾರ್.. ತುಂಬಾ ಅಪ್ಸೆಟ್ ಆಗಿದ್ದಾರೆ...:"
"ಮಗೂನ ಕಳಕೊಂಡವ್ಳು ನಾನು.. ನನ್ನ ದುಃಖ ಅವರಿಗೇನು ಗೊತ್ತಾಗುತ್ತೆ.. ನಾನಿಲ್ಲಿಂದ ಬರಲ್ಲ.."

"ಶಾಂತಾ..ಶಾಂತಾ...ರೀ ಶಾಂತಾ ಅವರೆ"
".. ನೋಡಿ... ನೋಡಿ ಶೀಲಾ ಮಿಸ್... ನಮ್ ಚಿರೂ ಗತಿ ಏನಾಯ್ತು.. ನೀವೆಲ್ಲ ಇದ್ದೂ ಮಕ್ಳಿಗೆ ಈ ಸ್ಥಿತಿ ಬಂತಲ್ಲ... ನಿಮ್ಮನ್ನ ನಂಬಿ ನಾವು ಕಳಿಸಿದ್ವಲ್ಲ ಮಿಸ್.."
"ನಾವೂ ಏನೂ ಮಾಡಕ್ಕಾಗ್ಲಿಲ್ಲ ಶಾಂತಾ..ಡ್ರೈವರ್ದೂ ತಪ್ಪಿಲ್ಲವಂತೆ... ನೀವು  ಸ್ವಲ್ಪ.. ಸಮಾಧಾನವಾಗಿರಿ.. ಯಾಕೆ ನಿಮ್ ಚಿರಂತನ್ ಮನೆಗೆ ಬರ್ಲಿಲ್ಲ?"
"ಮನೇಗಾ? ಟೂರಿಗ್ ಹೋಗ್ತೀನಂತ ಬೆಳಗ್ಗೆ ಆರಕ್ಕೆ ಮನೆ ಬಿಟ್ಟು ಅಜಯ್ ಅಪ್ಪನ ಜತೆಗೆ ಹೋಗಿದ್ ಮಗು.. ಇಲ್ಲಿ ಹೀಗಾಗಿ ಕೂತಿದೆ.. ಮನೆಗೆ ಹೇಗೆ  ಬರ್ತಾನೆ ಮಿಸ್..."
"ಇಲ್ಲ ಶಾಂತಾ, ಚಿರಂತನ್ ಈ ಬಸ್ಸಲ್ಲಿ ಬರ್ಲಿಲ್ಲ.. ಬಸ್ ಹತ್ತೋ ಆತುರದಲ್ಲಿ ಬಿದ್ದು ಹಣೆ ಕಲ್ಲಿಗೆ ಬಡಿದು ತುಂಬ ರಕ್ತ ಬಂತು.. ನಾವೇ ನರ್ಸಿಂಗ್ ಹೋಮ್ನಲ್ಲಿ ಸ್ಟಿಚಸ್ ಹಾಕ್ಸಿ ನಮ್ ಸೀನಪ್ಪನ್ ಜತೆ ಮನೇಗ್ ಕಳಿಸಿದ್ವಿ..ನಿಮ್ ಮನೆ ಫೋನ್ಗೆ ಎಷ್ಟ್ ಸರ್ತಿ ರಿಂಗ್ ಮಾಡಿದ್ವಿ ಗೊತ್ತಾ..ನೀವು ತುಂಬ ಲಕ್ಕಿ...ಬಸ್ಸು ಹೊರಟ ಒಂದು ಗಂಟೇಲೆ ಹೀಗೆಲ್ಲ ...ನಾನ್ ......... "
          ಮಕ್ಕಳ ಟಿಫನ್ ಬಾಕ್ಸುಗಳು ಬ್ಯಾಗುಗಳು ಟೋಪಿಗಳು ವಾಟರ್ ಬಾಟಲ್‌ಗಳು ಕೋಟೆರಾಮನ ಹಳ್ಳದಲ್ಲಿ ಚೆಲ್ಲಾಪಿಲ್ಲಿಯಾಗಿ ತೇಲುತ್ತಿದ್ದವು.. ಅನೇಕ ವಾಟರ್ ಬಾಟಲ್‌ಗಳು ದಡಕ್ಕೆ ಬಂದು ಬಿದ್ದಿದ್ದವು..ಮಕ್ಕಳನ್ನು ಕಳೆದುಕೊಂಡ ಅನೇಕ ತಾಯಂದಿರ ಗೋಳಾಟ ಚೀರಾಟ ನರಳಾಟ ಯಾವುದೂ ಈ ತಾಯಿಯ ಕಿವಿಗಳಿಗೆ ಬೀಳಲಿಲ್ಲ! ಬೀಳಲು ಹೇಗೆ ಸಾಧ್ಯ?
                       ...................................................
ಡಾ ಉಷಾ ಫಾಟಕ್                                                                                              
 ೧೮.೦೯.೨೦೦೯                                                                                                  


 
"  


                          ನಾನು ಯಾರು 
                         -------------  

ನಾನು ಯಾರು ?

ಹಾಗೆಂದು ಯೋಚಿಸುವಾಗಲೆಲ್ಲ
ನನಗೆ ನೆನಪಾಗುವರು ಇವರೆಲ್ಲ
ನಾ ನೋಡಲು ಅಜ್ಜಿಯಂತಂತೆ
ಕೆಲಸದ ಅಚ್ಚುಕಟ್ಟು ಅಮ್ಮನ ಬಳುವಳಿ
ಅಪ್ಪನದೇ ಧಾರಾಳತನ

ಬರೆಯುವುದು ಒರೆಯುವುದು ಅಜ್ಜನಂತೆಯೇ ಅಂತೆ
ಅಣ್ಣನ ಸಹನೆ ಅಕ್ಕನ ಸಿರಿ ಕಂಠ
ಸೊದರತ್ತೆಯ ನೀಳಜಡೆ ಮಾಮನ ಹೊಟ್ಟೆಬಾಕತನ  
ಎಲ್ಲರಿಂದೊಂದೊಂದು ಗುಣ ತನ ಪಡೆದ
ನಾನು ನಿಜಕ್ಕೂ ಯಾರು ? 

ನಾನೆಂದರೆ ಬೇರೆ ಯಾರಲ್ಲ!
ತನ್ನಂತೆ ಪರರ ಬಗೆವ
ಅಯ್ಯಾ ಎನ್ನುತ ಸ್ವರ್ಗ ಕಾಣುವ
ಸಂತೆಯೊಳಗಿದ್ದೂ ಸಂತಳಂತಿರುವ

ಕುಲದ ನೆಲೆಯ ಕೆದಕದೆ ಕಡೆಗಣಿಸುವ 
ಆ ಅಂದಿನ ಮಂದಿಯನ್ನೆಲ್ಲ  ಓದಿಓದಿ
ಮರುಳಾಗಿರುವ ಕೂಚುಭಟ್ಟಿನಿ !


ಡಾ. ಉಷಾ ಫಾಟಕ್
ಮೈಸೂರು